ಅನಿಲ್ ಕುಂಬ್ಳೆ
1970-. ಪ್ರಸಿದ್ಧ ಕ್ರಿಕೆಟ್ ಆಟಗಾರ. 1970 ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಆರ್.ವಿ.ಶಿಕ್ಷಣ ಸಂಸ್ಥೆಯಲ್ಲಿ ಓದಿ ಬಿ.ಇ. ಪದವಿ ಪಡೆದರು. ಎತ್ತರದ ನಿಲವುಳ್ಳ ಇವರು ಸಾಂಪ್ರಾದಾಯಿಕ ಶೈಲಿಯಲ್ಲಿ ಸ್ಪಿನ್, ಗೂಗ್ಲಿ, ಮಧ್ಯಮ ವೇಗದ ಬೌಲರ್ ಆಗಿ ಪರಿಣಿತರು. ಬ್ಯಾಟಿಂಗ್‍ನಲ್ಲಿ ಪರಿಶ್ರಮವುಳ್ಳವರು. ಆರಂಭದಲ್ಲಿ ಇವರು ಬ್ಯಾಟ್ಸ್‍ಮನ್ ಆಗಿಯೇ ಭರವಸೆ ಮೂಡಿಸಿದ್ದರು. 19 ವರ್ಷದ ಒಳಗಿನ ಆಟಗಾರರಾಗಿ ಭಾರತವನ್ನು ಪ್ರತಿನಿಧಿಸಿ ಪಾಕಿಸ್ತಾನದ ವಿರುದ್ಧ 1990ರಲ್ಲಿ ನಡೆದ ಪಂದ್ಯವೊಂದರಲ್ಲಿ 113 ರನ್ ಬಾರಿಸಿದ್ದರು. ಇದೇ ವರ್ಷ ಆಸ್ಟ್ರೇಲಿಯ ಕಪ್‍ಗಾಗಿ ಷಾರ್ಜದಲ್ಲಿ ನಡೆದ ಶ್ರೀಲಂಕ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಆಡಿದರು. ಇದು ಇವರು ಆಡಿದ ಮೊದಲ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯ. ಇವರು ಭಾರತ ತಂಡದ ಉಪನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 

	1999 ಫೆಬ್ರವರಿ 4ರಂದು ಪಾಕಿಸ್ತಾನದ ವಿರುದ್ಧ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಟೆಸ್ಟ್ ಮ್ಯಾಚ್‍ನ 2ನೆಯ ಇನ್ನಿಂಗ್ಸ್‍ನಲ್ಲಿ 23.3 ಓವರ್‍ಗಳಲ್ಲಿ 74 ರನ್‍ಗಳನ್ನಿತ್ತು 10 ವಿಕೆಟ್‍ಗಳನ್ನು ಪಡೆದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದರು. ವಿಶ್ವ ಕ್ರಿಕೆಟ್ ರಂಗದಲ್ಲಿ ಇಂಥ ಸಾಧನೆಮಾಡಿದ ಎರಡನೆಯ ವ್ಯಕ್ತಿಯಾಗಿ ವಿಶ್ವಕ್ಕೆ ಪರಿಚಯಗೊಂಡರು. ಈ ಹಿಂದೆ ಇಂಗ್ಲೆಂಡ್ ತಂಡದ ಆಫ್ ಸ್ಪಿನ್ನರ್ ಜಿಮ್‍ಲೇಕರ್ ಇಂಥ ಸಾಧನೆಮಾಡಿದ ಮೊದಲ ವ್ಯಕ್ತಿಯಾಗಿದ್ದರು (1956). ಕುಂಬ್ಳೆಯವರು ಈ ದಾಖೆಲೆಯನ್ನು ಸರಿಗಟ್ಟಿದ ಏಕೈಕ ಭಾರತೀಯ. ಭಾರತದಲ್ಲಿ 200 ವಿಕೆಟ್ ಪದೆದವರಲ್ಲಿ ಕುಂಬ್ಳೆ ಎರಡನೆಯವರು. ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಹಾಗೂ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳು ಸೇರಿದಂತೆ 300 ವಿಕೆಟ್ ಪಡೆದ ಶ್ರೇಷ್ಠವರಲ್ಲಿ ಕುಂಬ್ಳೆಯೂ ಒಬ್ಬರು. ಉಳಿದ ಇಬ್ಬರು ಪಾಕಿಸ್ತಾನದ ವಾಕರ್‍ಯೂನಿಸ್ ಹಾಗೂ ವಾಸಿಂ ಅಕ್ರಮ್. ಕೋಲ್ಕತ್ತದಲಿ 1993- 94ರಲ್ಲಿ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ 12 ರನ್ ನೀಡಿ 6 ವಿಕೆಟ್ ಪಡೆದಿದ್ದು ಇವರ ಇನ್ನೊಂದು ಸಾಧನೆ.

	ಇವರು ಹಲವಾರು ಅಂತಾರಾಷ್ಟ್ರೀಯ ಟೆಸ್ಟ್ ಹಾಗೂ ಒಂದು ದಿನ ಪಂದ್ಯಗಳಲ್ಲಿ ಆಡಿದ್ದಾರೆ. ತಮ್ಮ ಮಾಂತ್ರಿಕ ಬೌಲಿಂಗ್ ಮೂಲಕ ಭಾರತಕ್ಕೆ ಅನೇಕ ಸಂದರ್ಭಗಳಲ್ಲಿ ಗೆಲವು ತಂದಿತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ (21 ಟೆಸ್ಟ್) 100 ವಿಕೆಟ್‍ಗಳನ್ನು ಪಡೆದ ಭಾರತದ ಕೆಲವೇ ಬೌಲರ್‍ಗಳಲ್ಲಿ ಇವರೂ ಒಬ್ಬರು. ಅನೇಕ ಸಂದರ್ಭಗಳಲ್ಲಿ ಬೌಲಿಂಗ್‍ನಲ್ಲಿ ತಮ್ಮ ಅಮೋಘ ಕೈಚಳಕವನ್ನು ಪ್ರದರ್ಶಿಸಿದ್ದಾರೆ. 1994ರ ಹೀರೋ ಕಪ್ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಅದ್ವಿತೀಯ ಸಾಧನೆಗೈದದ್ದು ಇಂದಿಗೂ ದಾಖಲೆಯೇ. ಆಗ ನ್ಯೂಜಿಲೆಂಡ್ ತಂಡಕ್ಕೆ 10 ಓವರ್‍ಗಳಲ್ಲಿ 33 ರನ್ ನೀಡಿ 5 ವಿಕೆಟ್ ಪಡೆದರು. ವಿಲ್ಸ್‍ವಲ್ರ್ಡ್ ಕಪ್‍ನಲ್ಲಿನ ಇವರ ಸಾಧನೆ ಇಂದಿಗೂ ಕ್ರಿಕೆಟ್ ರಂಗದಲ್ಲಿ ಅಚ್ಚಳಿಯದೆ ಉಳಿದಿದೆ.
	
ಇವರಿಗೆ ಸಂದ ಗೌರವ, ಪ್ರಶಸ್ತಿಗಳು ಅನೇಕ. ಇವರ ಸಾಧನೆಯನ್ನು ಗಮನಿಸಿ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿಯನ್ನಿತ್ತು ಗೌರವಿಸಿದೆ. 1995ರಲ್ಲಿ ಭಾರತ ಸರ್ಕಾರ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನಿತ್ತು ಇವರನ್ನು  ಗೌರವಿಸಿದೆ.	

 	 
(ಎಸ್.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ